ವಾಘೇಲರು

	ಅನ್ಹಿಲವಾಡ ಚಾಳುಕ್ಯವಂಶದ ಒಂದು ಶಾಖೆ. ಇದರ ಮೂಲಪುರುಷ ಧವಳ. ಇವನು ಚಾಳುಕ್ಯ ಕುಮಾರಪಾಲನ ತಾಯಿಯ ಸೋದರಿಯನ್ನು ವಿವಾಹವಾಗಿದ್ದ. ಇವನ ಮಗ ಅರ್ಣೋರಾಜ. ಅವನಿಗೆ ಆನಾಕ ಎಂಬ ಹೆಸರೂ ಇತ್ತು. ಅವನನ್ನು ಕುಮಾರಪಾಲ ಭೀಮಪಲ್ಲಿಯ ಸಾಮಂತನಾಗಿ ನಿಯಮಿಸಿದ. ವ್ಯಾಘ್ರಪಲ್ಲಿ ಎಂಬ ಗ್ರಾಮವನ್ನು ದತ್ತಿಯಾಗಿ ಪಡೆದುದರಿಂದ ಆನಾಕನಿಗೂ ಅವನ ಉತ್ತರಾಧಿಕಾರಿಗಳಿಗೂ ವಾಘೇಲರು ಎಂಬ ಹೆಸರು ಬಂದಿತೆಂದು ಜೈನಗ್ರಂಥಗಳಿಂದ ತಿಳಿದುಬರುತ್ತದೆ. ಕುಮಾರಪಾಲನಿಂದ ಮೊದಲ್ಗೊಂಡು ಇಮ್ಮಡಿ ಭೀಮನವರೆಗೂ ಈತ ಅನ್ಹಿಲವಾಡ ಚಾಳುಕ್ಯರ ಸಾಮಂತನಾಗಿದ್ದ. ಅಬಲನಾದ ಭೀಮ ವೈರಿಗಳನ್ನು ನಿಗ್ರಹಿಸಲಾಗದೆ ಹೋದಾಗ, ಆನಾಕ ಅವನ ಪಕ್ಷವಹಿಸಿ ಶತ್ರುಗಳನ್ನೆಲ್ಲ ಸಂಹರಿಸಿದ. ಆತ ಮೇದಪಾಟ, ಚಂದ್ರಾವತೀಪುರ ಮೊದಲಾದ ದೇಶಗಳ ಅರಸರುಗಳನ್ನೂ ವಧಿಸಿದನೆಂದು ಸುಕೃತ ಕೀರ್ತಿ ಕಲ್ಲೋಲಿನಿ ಎಂಬ ಗ್ರಂಥದಿಂದ ತಿಳಿಯಬರುವುದು. ಭೀಮನ ಸ್ಥಾನವನ್ನು ಭದ್ರಪಡಿಸುವ ಕಾಲದಲ್ಲೇ ಆನಾಕ ಮೃತನಾದ. ಆನಾಕನ ಮಗ ಲವಣಪ್ರಸಾದ; ಇವನ ಮಗ ವೀರಧವಳ. ಇಮ್ಮಡಿ ಭೀಮ ಪಟ್ಟಕ್ಕೆ ಬರುವವರೆಗೆ ಲವಣಪ್ರಸಾದನೂ ವೀರಧವಳನೂ ವ್ಯಾಘ್ರಪಲ್ಲಿಯ ಇಲ್ಲವೆ ಭೀಮಪಲ್ಲಿಯ ಸಾಮಂತ ಮಾತ್ರವಾಗಿದ್ದರು. ಇವರಿಬ್ಬರ ನಿಷ್ಕಳಂಕ ಸ್ವಾಮಿನಿಷ್ಠೆಯಿಂದ ಸುಪ್ರೀತನಾದ ಭೀಮ ಇವರನ್ನು ಮಹಾಮಂಡಲೇಶ್ವರ ಪದವಿಗೇರಿಸಿ ಧವಳಕ್ಕದ (ಧೋಲ್ಕ) ಸುತ್ತುಮುತ್ತಣ ಪ್ರದೇಶದಲ್ಲಿ ನೆಲೆಗೊಳಿಸಿದ (ಧವಳಕ್ಕ ಎಂಬ ಹೆಸರು ಅಜ್ಜನಾದ ಧವಳನಿಂದ ಬಂದುದಾಗಿದೆ). ಭೀಮನ ಪಟ್ಟವನ್ನು ಜಯಸಿಂಹನೆಂಬಾತ ಕಸಿದುಕೊಂಡಾಗ ಭೀಮನ ಪರಿಸ್ಥಿತಿ ಶೋಚನೀಯವಾಯಿತು. ಯಾದವರಾಜ ಭಿಲ್ಲಮನೂ ಅವನ ಮಗ ಜೈತುಗಿಯೂ ಪರಮಾರ ಸುಭಟವರ್ಮನೂ ಭೀಮನ ರಾಜ್ಯವನ್ನು ಅನೇಕ ಸಲ ಆಕ್ರಮಿಸಿದರು. ಭೀಮನ ಸಾಮಂತರೂ ಇವನನ್ನು ಕಿತ್ತೆಸೆಯಲು ಹವಣಿಸಿದರು. ಆಗ ಭೀಮ ಸ್ವಾಮಿನಿಷ್ಠ ಲವಣಪ್ರಸಾದನ ನೆರವನ್ನು ಬಯಸಿ, ಇವನನ್ನು ಸರ್ವೇಶ್ವರನಾಗಿ, ಎಂದರೆ ಉಪರಾಜಪ್ರತಿನಿಧಿಯಾಗಿ ನಿಯಮಿಸಿ ಗೂರ್ಜರ ರಾಜ್ಯವನ್ನು ಉಳಿಸಿಕೊಂಡ. ಭೀಮ ಹೆಸರಿಗೆ ಮಾತ್ರ ಅರಸನಾಗಿ ಉಳಿದುಕೊಂಡ. ಗುಜರಾತ್ ರಾಜ್ಯಕ್ಕೆ ನಿಜವಾಗಿ ಅರಸರಾಗಿದ್ದವರು ತಂದೆ ಮಕ್ಕಳಾದ-ಲವಣಪ್ರಸಾದ ಮತ್ತು ವೀರಧವಳ. ಇವರು ತಮ್ಮೊಡೆಯನ ವಿಶ್ವಾಸಕ್ಕೆ ದ್ರೋಹ ಬಗೆಯದೆ, ಗುಜರಾತ್ ಸಿಂಹಾಸನಕ್ಕೆ ವಿಧೇಯರಾಗಿಯೇ ಉಳಿದರು. ಲವಣಪ್ರಸಾದ ಗೂರ್ಜರ ರಾಜಧಾನಿಯಲ್ಲಿ ಸರ್ವೇಶ್ವರನಾಗಿದ್ದಾಗ, ಮಗ ವೀರಧವಳ ಧೋಲ್ಕದಲ್ಲಿ ನಿರಾಂತಕವಾಗಿ ಅಧಿಕಾರ ನಡೆಸುತ್ತಿದ್ದ. ವೀರಧವಳನ ಶೌರ್ಯಪರಾಕ್ರಮದಿಂದಲೂ ಲವಣಪ್ರಸಾದನ ರಾಜನಿಷ್ಠೆಯಿಂದಲೂ ಮಂತ್ರಿ ವಸ್ತುಪಾಲನ ರಾಜನೈಪುಣ್ಯದಿಂದಲೂ ಗುಜರಾತ್ ಸಕಲ ಸಂಕಟಗಳನ್ನೂ ನಿವಾರಿಸಿ ಕೊಂಡಿತು. ವಸ್ತುಪಾಲನೂ ಅವನ ಸಹೋದರ ತೇಜಪಾಲನೂ ಹಿಂದೆ ಭೀಮನ ಸೇವೆಯಲ್ಲಿದ್ದರು; 1219ರಲ್ಲಿ ಲವಣಪ್ರಸಾದನ ಮಂತ್ರಿಗಳಾದರು.

	ಭೀಮನ ಉಚ್ಚಾಟನೆಗೆ ಹವಣಿಸುತ್ತಿದ್ದ ಹಲವಾರು ಸಾಮಂತರೊಡನೆ ಲವಣಪ್ರಸಾದನೂ ವೀರಧವಳನೂ ಸಂಘರ್ಷಕ್ಕೆ ಬಂದಿದ್ದರು. ಆ ವೈರಿಗಳೊಡನೆ ವೀರಧವಳನ ಮಾವನೂ ಸೇರಿಕೊಂಡಿದ್ದ. ಅಳಿಯನಿಗೂ ಮಾವನಿಗೂ ಘನಘೋರ ಸಂಗ್ರಾಮ ನಡೆಯಿತು. ಪಂಚಗ್ರಾಮ ಯುದ್ಧ ವೆಂದು ಹೆಸರಾದ ಈ ಕಾಳಗದಲ್ಲಿ ವೀರಧವಳ ಗಾಯಗೊಂಡ. ಲವಣಪ್ರಸಾದನೂ ವೀರಧವಳನೂ ಮಂತ್ರಿ ವಸ್ತುಪಾಲನೊಡನೆ ವರ್ಧಮಾನಪುರ ಮತ್ತು ಗೋಹಿಲವತಿ ರಾಜರನ್ನು ಸದೆಬಡಿದರು. ಅಲ್ಲಿಂದ ವಾಮನಸ್ಥಲಿಗೆ ಮುನ್ನಡೆದು, ಅಲ್ಲಿ ವೀರಧವಳನ ಭಾವಂದಿ ರಾದ ಸಂಗನನ್ನೂ ಚಾಮುಂಡನನ್ನೂ ಸಂಧಿಸಿ, ಅವರನ್ನು ಕೊಂದು, ಅಪಾರ ಧನಕನಕಾದಿ ಸಂಪತ್ತಿನೊಡನೆ ಮರಳಿದರು. ವೀರಧವಳನ ಪತ್ನಿ ಜಯತಲದೇವಿ ಗಂಡನ ಪರವಾಗಿ ತಂದೆ ಮತ್ತು ಸೋದರರೊಡನೆ ಸಂಧಾನಕ್ಕೆ ಪ್ರಯತ್ನಿಸಿ ವಿಫಲಳಾದಳಂತೆ. ವೀರಧವಳನಿಗೆ ಭದ್ರೇಶ್ವರದ ಪ್ರತಿಹಾರ ಭೀಮಸೇನನೊಡನೆ ಯುದ್ಧ ಸಂಭವಿಸಿ ಭೀಮಸೇನ ಸೋತು ಪಲಾಯನಮಾಡಿದ. ಈ ಯುದ್ಧಗಳು ಸು. 1221ರಲ್ಲಿ ನಡೆದವು. ಈ ನಡುವೆ ವೀರಧವಳ ಸ್ತಂಭವನ್ನು (ಕ್ಯಾಂಬೆ) ವಶಪಡಿಸಿಕೊಂಡು ಅಲ್ಲಿಗೆ ಮಂತ್ರಿ ವಸ್ತುಪಾಲನನ್ನು ಮಾಂಡಳಿಕನಾಗಿ ನಿಯಮಿಸಿದ.

	ವಾಘೇಲರಿಗೆ ಮಾರ್ವಾರ ರಾಜರೊಡನೆಯೂ ಯುದ್ಧಪ್ರಾಪ್ತಿಯಾಗಿತ್ತು. ಲವಣಪ್ರಸಾದ ಅವರೊಡನೆ ಸಂಧಿಮಾಡಿಕೊಂಡ. ಯಾದವರೂ ಮಾರ್ವಾರರಾಜರೂ ಲವಣಪ್ರಸಾದ-ವೀರಧವಳರೊಡನೆ ಯುದ್ಧನಿರತರಾ ಗಿದ್ದಾಗ, ಚಾಹಮಾನ ಶಂಖನು ಸ್ತಂಭವನ್ನು ಆಕ್ರಮಿಸಿ ವಸ್ತುಪಾಲನೊ ಡನೆ ಭೀಕರವಾಗಿ ಕಾದಾಡಿ ಮೃತನಾದ. ಗೋಧ್ರ ಮಾಂಡಲಿಕನೂ ವೀರಧವಳನೊಡನೆ ಯುದ್ಧ ಸಾರಿದನೆಂದೂ ವಾಘೇಲರ ಮಂತ್ರಿಯಾದ ತೇಜಪಾಲ ಗೋಧ್ರನನ್ನು ಸೆರೆಹಿಡಿದನೆಂದೂ ಜೈನಗ್ರಂಥಗಳಲ್ಲಿ ಹೇಳಿದೆ. ಈ ಹೇಳಿಕೆಗೆ ಇತರ ಆಧಾರಗಳು ಸಿಕ್ಕಿಲ್ಲ. ಲವಣಪ್ರಸಾದನೂ ವೀರಧವಳನೂ ಮಾರ್ವಾರಾಜರನ್ನು ಮರ್ದಿಸುತ್ತಿದ್ದ ಕಾಲಕ್ಕೆ ಯಾದವ ಸಿಂಹಣ ಗುಜರಾತ್ ಮೇಲೆ ದಂಡೆತ್ತಿ ಬಂದ. ವೀರಧವಳ ಮಹಮ್ಮದೀಯರೊಡನೆ ಯುದ್ಧದಲ್ಲಿದ್ದಾಗ ಸಿಂಹಣ ತಪತೀನದಿಯವರೆಗೂ ವಿಜೃಂಭಿಸಿಕೊಂಡು ಬಂದು ವಾಘೇಲರ ಪತನಕ್ಕೆ ಹವಣಿಸಿದ. ಮ್ಲೇಚ್ಛರ ಆಕ್ರಮಣಕಾಲದಲ್ಲಿ ಹಿಂದು ರಾಜರೆಲ್ಲರೂ ಒಗ್ಗಟ್ಟಾಗಿ ವೀರಧವಳನ ಬೆಂಬಲಕ್ಕೆ ನಿಂತಿದ್ದರೂ ಮೇದಪಾಟ ಜಯತಲ (ಜೈತ್ರಸಿಂಹ 1213-52) ಮಾತ್ರ ಗರ್ವದಿಂದ ಬೀಗಿ ತಟಸ್ಥನಾಗಿ ನಿಂತ. ಮಹಮ್ಮದೀಯರು ಅವನ ರಾಜ್ಯವನ್ನು ಸೂರೆಮಾಡಿದರು. ಆದರೆ ಆ ಕಾಲಕ್ಕೆ ವೀರಧವಳನೂ ದಂಡೆತ್ತಿಬಂದುದರಿಂದ ಮಹಮ್ಮದೀಯರು ಪಲಾಯನಮಾಡಿದರು. ವೀರಧವಳ 1229ರಲ್ಲಿ ಅಮೀರ್-ಇ-ಸಿಕಾರ ಎಂಬವನೊಡನೆಯೂ ಕಾದಾಡಿದ. 1232ರಲ್ಲಿ ಲವಣಪ್ರಸಾದ ವೀರಧವಳನಿಗೆ ಸಿಂಹಾಸನವನ್ನು ಬಿಟ್ಟುಕೊಟ್ಟ. ವಾಘೇಲರ ಮಂತ್ರಿಗಳಾದ ವಸ್ತುಪಾಲ-ತೇಜಪಾಲರು ಪ್ರಾಗ್ವಾಟ ವಂಶಜರು. ಗೂರ್ಜರ ರಾಜ್ಯ ನಿರ್ಮಾಣಕ್ಕೆ ಇವರೇ ಶಿಲ್ಪಿಗಳು. ಇವರು ಮಂತ್ರಿಗಳಾಗಿ ನಿಯುಕ್ತರಾದಾಗ ಗುಜರಾತಿನ ಸ್ಥಿತಿ ಶೋಚನೀಯವಾಗಿತ್ತು. ರಾಜ್ಯದ ಒಳಗೂ ಹೊರಗೂ ವೈರಿಗಳಿದ್ದರು. ವಿದೇಶಿಯರ ಗೃಧ್ರದೃಷ್ಟಿಗೂ ಗುಜರಾತ್ ಗುರಿಯಾಗಿತ್ತು. ಆದರೆ ಇವರಿಬ್ಬರು ಮಂತ್ರಿ ಸಹೋದರರು ರಾಜ್ಯವನ್ನು ಅಪಾಯದಿಂದ ಪಾರುಮಾಡಿ ಸುಭದ್ರ ಪ್ರಭುತ್ವವನ್ನು ನೆಲೆಗೊಳಿಸಿದರು. ಅನ್ಹಿಲವಾಡ ಚಾಳುಕ್ಯರಾಜ್ಯಕ್ಕೆ ಇವರೇ ನಿಜವಾದ ಅರಸರೆಂದೂ ಅದರ ಉಳಿವಿಗೆ ಇವರೇ ಕಾರಣರೆಂದೂ ಜೈನಗ್ರಂಥಗಳು ಘೋಷಿಸಿವೆ. ಇವರು ಸಮರ್ಥ ರಾಜ್ಯಧುರಂಧರರಷ್ಟೇ ಅಲ್ಲ, ವಾಘೇಲರ ಕಾಲದಲ್ಲಿ ಜೈನಧರ್ಮದ ಉದ್ಧಾರಕ್ಕೆ ಶಕ್ತಿಮೀರಿ ಶ್ರಮಿಸಿದವರು. ಆದರೆ ನಿಷ್ಠಾವಂತ ಜೈನರಾಗಿದ್ದರೂ ಧರ್ಮಾಂಧರಾಗಿದ್ದವರಲ್ಲ; ಹರಿ-ಹರನನ್ನೂ ಇವರು ಪೂಜಿಸುತ್ತಿದ್ದರು. ವಸ್ತುಪಾಲ ಶಸ್ತ್ರಶಾಸ್ತ್ರ ಪಾರಂಗತನಾಗಿದ್ದ. ಜೈನ ಹಾಗೂ ಜೈನೇತರ ಅನೇಕ ವಿದ್ವಾಂಸರಿಗೆ ಆಶ್ರಯದಾತನಾಗಿದ್ದ. ಸ್ವತಃ ಕೃತಿಕಾರನಾಗಿದ್ದು ನರನಾರಾಯಣಾನಂದ ಎಂಬ ಗ್ರಂಥ ರಚಿಸಿದ್ದ. ವಸ್ತುಪಾಲನೂ ತೇಜಪಾಲನೂ ಹಲವಾರು ಧರ್ಮಸಂಸ್ಥೆಗಳನ್ನು, ಭವ್ಯಭವನಗಳನ್ನು ನಿರ್ಮಿಸಿದರು, ಕೆರೆಬಾವಿಗಳನ್ನು ತೋಡಿಸಿದ್ದರು, ಅನ್ನಸತ್ರಗಳನ್ನೂ ಉದ್ಯಾನವನಗಳನ್ನೂ ಅರವಟ್ಟಿಗೆ ಗಳನ್ನೂ ನಿರ್ಮಿಸಿದ್ದರು, ಹಲವಾರು ದೇವಾಲಯಗಳಿಗೆ ಸುವರ್ಣದಂಡಗ ಳನ್ನು ನೀಡಿದ್ದರು. ಹೀಗೆ ಈ ಸಚಿವೋತ್ತಮರು ತಮ್ಮ ಸಮಸ್ತ ಸಂಪತ್ತನ್ನೂ ಜನಹಿತಕಾರ್ಯಗಳಿಗೆ ವಿನಿಯೋಗಿಸಿದ ಲೋಕಸೇವಾ ಪರಾಯಣರೆಂದು ಸ್ತುತರಾಗಿದ್ದಾರೆ. “ಭೋಜನು ಮೃತನಾದ ಮೇಲೆ, ಮುಂಜನು ಸ್ವರ್ಗವಾಸಿಯಾದ ಮೇಲೆ, ವಸ್ತುಪಾಲನಂತೆ ದೀನದಲಿತರ ಕಷ್ಟನಿವಾರಣೆ ಮಾಡಿದ ಪುಣ್ಯಾತ್ಮರು ಬೇರಾರೂ ಇಲ್ಲ” ಎಂದು ಗಿರ್ನಾರ್ ಶಾಸನ ಸಾರಿದೆ. ವೀರಧವಳ ಸು. 1238ರಲ್ಲಿ ಮೃತನಾದ. ಇವನಿಗೆ ಪ್ರತಾಪಮಲ್ಲ, ವೀಸಲದೇವ ಎಂಬ ಇಬ್ಬರು ಮಕ್ಕಳಿದ್ದರು. ವೀರಧವಳ ಮೃತನಾದಾಗ ಉತ್ತರಾಧಿಕಾರಕ್ಕಾಗಿ ಅಣ್ಣ ವೀಸಲನಿಗೂ ತಮ್ಮ ವೀರಮನಿಗೂ ವಿವಾದವುಂಟಾಯಿತು. 1243ರಲ್ಲಿ ಈ ಅಂತಃ ಕಲಹಗಳೆಲ್ಲ ಕೊನೆಗೊಂಡು ವೀಸಲ ಮಹಾಮಂಡಲೇಶ್ವರನಾದ. ಮಾಳವರಾಜ, ಯಾದವರಾಜರಾದ ಸಿಂಹಣ ಮತ್ತು ಕೃಷ್ಣ, ಪರಮಾರ ಜೈತುಗಿ ಮತ್ತು ಮೇವಾಡ ಹಾಗೂ ಕರ್ನಾಟಕ ರಾಜರು ಚಾಳುಕ್ಯರಾಜ್ಯವನ್ನು ಆಕ್ರಮಿಸಿದಾಗ, ಮಹಾಮಂಡಲೇಶ್ವರ ವೀಸಲರಾಜ ಅವರೆಲ್ಲರನ್ನೂ ಹೊಡೆದಟ್ಟಿ ಸಮರ್ಥ ಯೋಧನೆಂದು ಪ್ರಖ್ಯಾತನಾದ. 1246ರಲ್ಲಿ ವೀಸಲ `ಮಹಾರಾಜಾಧಿರಾಜ ಪದವಿಗೇರಿದ. ತೇಜಪಾಲ ವೀಸಲದೇವನ ಮಂತ್ರಿಯಾಗಿದ್ದ. ತೇಜಪಾಲ ಸು. 1249ರಲ್ಲಿ ಮರಣಹೊಂದಿದ ಮೇಲೆ ನಾಗಡ ಮಹಾಮಾತ್ಯನಾದ. ವೀಸಲ ಯುದ್ಧವೀರನಷ್ಟೇ ಅಲ್ಲ, ಸಾಹಿತ್ಯಪೋಷಕನಾಗಿಯೂ ಪ್ರಸಿದ್ಧನಾಗಿದ್ದಾನೆ. ಸೋಮೇಶ್ವರ, ಅರಿಸಿಂಹ, ಅಮಂಚಂದ್ರಸೂರಿ ಮೊದಲಾದ ಅನೇಕ ಕವಿಗಳು ಇವನ ಆಸ್ಥಾನದಲ್ಲಿದ್ದವರು. ವೀಸಲರಾಜನ ರಾಣಿ ನಾಗಲದೇವಿ. ಆಕೆ ವಿದಗ್ಧೆಯೆಂದೂ ಸಂಗೀತಕಲಾಪ್ರವೀಣೆಯೆಂದೂ ಸ್ತುತಳಾಗಿದ್ದಾಳೆ. ಗಂಡನೂ ತನ್ನಂತೆ ಸಂಗೀತಕಲೆಯಲ್ಲಿ ಪರಿಣತನಾಗ ಬೇಕೆಂದು ಆಕೆ ಆಸೆಪಟ್ಟು, ಬಹುಪ್ರಯತ್ನದಿಂದ ತನ್ನ ಅಭೀಷ್ಟವನ್ನು ನೆರವೇರಿಸಿಕೊಂಡಳಂತೆ. 1258ರಲ್ಲಿ ವೀಸಲದೇವನ ರಾಜ್ಯದಲ್ಲಿ ಭೀಕರ ಕ್ಷಾಮವುಂಟಾಯಿತು. ಆಗ ವೀಸಲ ಅಮಾತ್ಯ ನಾಗಡನ ಮೂಲಕ ಭದ್ರೇಶ್ವರದಿಂದ ಜಗಡೂಗನೆಂಬ ಧನಿಕ ವರ್ತಕನನ್ನು ಕರೆಯಿಸಿ, ಅವನಿಂದ ಕ್ಷಾಮನಿವಾರಣೆ ಮಾಡಿಸಿದನಂತೆ. ವೀಸಲದೇವ 1261ರಲ್ಲಿ ನಿಧನನಾದ. ಅಂದಿನಿಂದ ವಾಘೇಲರಾಜ್ಯ ಕಳೆಗುಂದಿತು. ವೀಸಲನ ಉತ್ತರಾಧಿಕಾರಿಯಾಗಿ ಪ್ರತಾಪಮಲ್ಲನ ಪುತ್ರನಾದ ಅರ್ಜುನದೇವನು ಪಟ್ಟಕ್ಕೆ ಬಂದ(1261-64. ಆದರೆ, ವೀಸಲದೇವ ಸ್ವತಃ ರಾಜ್ಯತ್ಯಾಗಮಾಡಿ ಅರ್ಜುನನಿಗೆ ಪಟ್ಟವನ್ನು ವಹಿಸಿಕೊಟ್ಟನೆಂದೂ ಕೆಲವರ ಅಭಿಪ್ರಾಯ). ಜೈನಗ್ರಂಥಗಳಿಂದ ವ್ಯಕ್ತವಾಗಿರುವಂತೆ ಇವನಿಗೆ ಮಹಾರಾಜಾಧಿರಾಜ, ಮಹಾರಾಜಶ್ರೀ, ಸಮಸ್ತ ರಾಜವಲ್ಲೀ ಸಮಾಲಮಕೃತ ಮಹಾರಾಜಾದಿ üರಾಜ ಎಂಬ ಬಿರುದುಗಳಿದ್ದವು. ಶ್ರೀ ಸೋಮ ಇವನ `ಮಹತ್ತಮನೂ `ಮಹಾಮಾತ್ಯನೂ ಆಗಿದ್ದ. ಅರ್ಜುನದೇವ 1274ರ ವರೆಗೆ ಪಟ್ಟಾರೂಢನಾಗಿದ್ದ. ಇವನಿಗೆ ರಾಮದೇವ, ಸಾರಂಗದೇವ ಎಂಬ ಮಕ್ಕಳಿದ್ದರು. ಇವರಿಬ್ಬರೂ ರಾಜ್ಯಭಾರದಲ್ಲಿ ತಂದೆಗೆ ನೆರವಾಗಿದ್ದರು. ರಾಮದೇವ ತಂದೆಗಿಂತ ಮೊದಲೇ ಮೃತನಾದನೆಂದು ತೋರುತ್ತದೆ. ಅರ್ಜುನದೇವನ ತರುವಾಯ 1274ರಲ್ಲಿ ಸಾರಂಗದೇವ ಉತ್ತರಾಧಿಕಾರಿ ಯಾಗಿ ಬಂದ. ಸಾರಂಗದೇವನಿಗೆ ಮಾಳವಧರಾಧೂಮಕೇತು, ಗುರ್ಜರ ಧರಣೀ ಸಮುದ್ಧರಣ, ಸಪ್ತಮ ಚಕ್ರವರ್ತಿ, ಭುಜಬಲಮಲ್ಲ ಮಹಾರಾಜ ಎಂಬ ಬಿರುದುಗಳಿದ್ದವು. ಈತ ವಾಘೇಲರ ಗತವೈಭವವನ್ನು ಪುನಃ ಸ್ಥಾಪಿಸಿದ. ಚಂದ್ರಾವತಿ ಪ್ರದೇಶವೂ ಇವನ ಪ್ರಭುತ್ವಕ್ಕೊಳಪಟ್ಟಿತ್ತು. ಇವನ ರಾಜ್ಯ ಪಶ್ಚಿಮದಲ್ಲಿ ಕಾಥೆಯವಾಡದಿಂದ ಪೂರ್ವದಲ್ಲಿ ಮಾಳವದವರೆಗೂ ವ್ಯಾಪಿಸಿತ್ತು. ಖೈರಾ, ಕಚ್ಛ, ಅನಿಹಿಲಪಾಟಕ ದೇಶಗಳೂ ಇವನ ರಾಜ್ಯಕ್ಕೆ ಸೇರಿದ್ದುವು. ಸು. 1285ರಲ್ಲಿ ವಾಘೇಲರಾಜ್ಯವನ್ನು ಆಕ್ರಮಿಸಿದ ಮಹಮ್ಮದೀಯರನ್ನು ಇವನು ಗೂಹಿಲ ಸಮರಸಿಂಹನ ನೆರವಿನಿಂದ ಜಯಿಸಿದ. ಆದರೆ ಕೆಲಕಾಲದ ಅನಂತರ ಇವನಿಗೂ ಸಮರಸಿಂಹನಿಗೂ ವಿರಸವುಂಟಾಯಿತು. ಆಗ ಇವನು ಪರಮಾರ ಪ್ರತಾಪಸಿಂಹನನ್ನು ಕೂಡಿಕೊಂಡು, ಸಮರಸಿಂಹನನ್ನು ಎದುರಿಸಿದ. ಮಾಳವರಾಜ್ಯದ ಇಮ್ಮಡಿ ಅರ್ಜುನದೇವನನ್ನೂ ಸೋಲಿಸಿದ್ದ. ಯಾದವರಾಜ ರಾಮಚಂದ್ರ ವಾಘೇಲರ ರಾಜ್ಯವನ್ನು ಆಕ್ರಮಿಸಿದಾಗ ಅವನನ್ನೂ ಹಿಂದಕ್ಕಟ್ಟಿದ. ಸಾರಂಗದೇವನ ತರುವಾಯ 1296ರಲ್ಲಿ ರಾಮದೇವನ ಮಗನೂ ವಾಘೇಲರ ಕೊನೆಯ ರಾಜನೂ ಆದ ಕರ್ಣದೇವ ಪಟ್ಟಕ್ಕೆ ಬಂದ. 1299ರಲ್ಲಿ ಅಲ್ಲಾವುದ್ದೀನ್ ಖಲ್ಜಿಯ ದಳಪತಿಗಳಾದ ಉಲುಫ್‍ಖಾನನೂ ನಜರತ್‍ಖಾನನೂ ಸಮಗ್ರ ಗೂರ್ಜರ ಪ್ರದೇಶವನ್ನು ಕರ್ಣದೇವನಿಂದ ಸೆಳೆದುಕೊಂಡುದಲ್ಲದೆ, ಇವನ ರಾಣಿ ಕೌಲದೇವಿಯನ್ನೂ (ಕಮಲಾದೇವಿ) ಅಪಹರಿಸಿ ಅಲ್ಲಾವುದ್ದೀನ್ ಖಲ್ಜಿಗೆ ಕಾಣಿಕೆಯಾಗಿ ಸಮರ್ಪಿಸಿದರು. ಇದರಿಂದ ದುಃಖತಪ್ತನಾದ ಕರ್ಣ ಅನಂತರ ತನ್ನ ಮಗಳು ದೇವಲಾದೇವಿಯೊಡನೆ ಬಾಗ್ಲನಕ್ಕೆ ಪಲಾಯನಮಾಡಿ ಅಲ್ಲಿ ಕೆಲಕಾಲ ಅರಸನಾಗಿದ್ದ. ಆದರೆ ಸು. 1306ರಲ್ಲಿ ಗುಜರಾತಿನ ಅಧಿಪತಿಯಾದ ಅಲಾಫ್‍ಕಾನನು ಬಾಗ್ಲಾನವನ್ನು ಆಕ್ರಮಿಸಿದ. ಭೀತನಾದ ಕರ್ಣದೇವ ಆ ಮೊದಲೇ ಯಾದವ ಶಂಕರನಿಗೆ ವಾಗ್ದತ್ತಳಾದ ದೇವಲಾದೇವಿಯನ್ನು ಮೂಲಬಲದೊಡನೆ ದೇವಗಿರಿಗೆ ಕಳುಹಿಸಿದ. ಆದರೆ ದಾರಿಯಲ್ಲಿ ಆಕೆಯನ್ನು ಮಹಮ್ಮದೀಯರು ಅಪಹರಿಸಿ ದೆಹಲಿಗೆ ಕಳುಹಿಸಿಕೊಟ್ಟರು. ಕರ್ಣನು ಅಲಾಫಖಾನನೊಡನೆ ಪ್ರಾಣದ ಹಂಗುತೊರೆದು ಕಾದಾಡಿದರೂ ನಿಷ್ಫಲವಾಗಿ ಕೊನೆಗೆ ದೇವಗಿರಿಗೆ ಪಲಾಯನ ಮಾಡಿದ. ಇಂಥ ದುರ್ಘಟನೆಗಳಿಂದ ಜರ್ಜರಿತನಾದ ಕರ್ಣ ಅನಾಮಿಕನಂತೆ ಎಲ್ಲಿಯೋ ನಿಧನ ಹೊಂದಿದ.	
    *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ